ಒಕ್ಕುವ ಯಂತ್ರ: ಪೈರಿನಿಂದ ಕಾಳುಗಳನ್ನು ಬೇರ್ಪಡಿಸುವ ಸಲಕರಣೆ. ಆದಿಮಾನವ ಕೃಷಿಯನ್ನು ಎಂದು ಆರಂಭಿಸಿದನೋ ತಿಳಿಯದು. ಆದರೆ ಅಂದೇ ಎರಡು ಮುಖ್ಯ ಸಮಸ್ಯೆಗಳನ್ನು ಎದುರಿಸಬೇಕಾಯಿತು-ಪೈರಿನ ಕೊಯ್ಲು ಹಾಗೂ (ಕೊಯ್ಲು ಮಾಡಿದ ಪೈರಿನಿಂದ) ಕಾಳುಗಳ ಒಕ್ಕಣೆ. ಈ ದಿಶೆಯಲ್ಲಿ ಅವನು ರಚಿಸಿದ ಮೊದಲ ಸಲಕರಣೆ ತೆನೆಗೋಲು. ಕೊಯ್ಲಿನ ಕೆಲಸದಲ್ಲಿ ಮಾತ್ರ ಉಪಯೋಗಿಸುವ ಕುಡುಗೋಲಿನ ಬಳಕೆ ಬಂದದ್ದು ಪ್ರ.ಶ.ಪು. ಸು.3000 ವರ್ಷಗಳಿಂದೀಚೆಗೆ. ಕೋಲ್ಗತ್ತಿಯ ಬಳಕೆ ಇನ್ನೂ ಈಚಿನದು. ಈಗಲೂ ಭಾರತದಲ್ಲಿ ಪರಿಸ್ಥಿತಿ ಹೆಚ್ಚು ಸುಧಾರಿಸಿಲ್ಲ. ರೈತರಿಗೆ ಕಟಾವಿಗೆ ಕುಡುಗೋಲೇ ಸಾಧನ. ಕೊಯ್ದ ಪೈರನ್ನು ಬಡಿದೋ ರೋಣಗಲ್ಲು ಹಾಯಿಸಿಯೋ ದನಗಳಿಂದ ತುಳಿಸಿಯೋ ಕಾಳನ್ನು ಬೇರೆ ಮಾಡುತ್ತಾರೆ. ಅದನ್ನು ಗಾಳಿಗೆ ತೂರಿ ಕಾಳನ್ನೂ ಹೊಟ್ಟನ್ನೂ ಬೇರ್ಪಡಿಸಿ ಕಾಳು ಒಕ್ಕಣೆ ಮಾಡುತ್ತಾರೆ. ರೈತರ ದೇಹಶ್ರಮ ಮುಖ್ಯವಾಗಿ ಈ ಎಲ್ಲ ಕೆಲಸಗಳಿಗೂ ಆಧಾರ.

ಪಾಶ್ಚಾತ್ಯ ದೇಶಗಳಲ್ಲಿ ಕಳೆದ ಒಂದೂವರೆ ಶತಮಾನದಲ್ಲಿ ಬೇಸಾಯದ ಅನೇಕ ಕೆಲಸಗಳಿಗೆ ಯಂತ್ರಗಳ ಬಳಕೆ ಜಾರಿಗೆ ಬಂದಿದೆ. ಅಲ್ಲಿ ಬೇಸಾಯದ ಎಲ್ಲ ವಿಧಿಗಳಲ್ಲೂ ಟ್ರ್ಯಾಕ್ಟರ್ ಬಳಕೆಗೆ ಬಂದು ಎತ್ತಿನ ಸ್ಥಾನವನ್ನು ಆಕ್ರಮಿಸಿದೆ. ಹಸಿಹುಲ್ಲಿನ ಕೊಯ್ಲಿಗೆ, ವಿವಿಧ ಕಾಳುಬೆಳೆಗಳು, ಆಲೂಗೆಡ್ಡೆ, ಕಡಲೆಕಾಯಿ, ಸಕ್ಕರೆ ಬೀಟು, ಕಬ್ಬು ಮುಂತಾದ ಬೆಳೆಗಳ ಒಕ್ಕಣೆಗೆ ಯಂತ್ರಗಳು ಸಜ್ಜಾಗಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಿದೆ.

 ಹುಲ್ಲು ಕೊಯ್ಲಿನ ಯಂತ್ರ (ಮೋವರ್) 
ಪಟ್ಟಣಗಳಲ್ಲಿನ ಉದ್ಯಾನಗಳಲ್ಲಿ ಹುಲ್ಲುಮೈದಾನ ಅಥವಾ ಹಸಲೆಯನ್ನು ಕತ್ತರಿಸಲು ಬಳಸುವ ಹಸಲೆ ಕತ್ತರಿಯ (ಲಾನ್ ಮೋವೆರ್) ಕತ್ತರಿಸುವ ಸಜ್ಜಿನಲ್ಲಿ ಒಂದು ಭದ್ರವಾದ ಉಕ್ಕಿನ ಅಗುಳಿ ಇದೆ. ಇದಕ್ಕೆ ಗುಳಿ ಹೊಡೆದ, ಮುಂದಕ್ಕೆ ಚಾಚಿರುವ ಬೆರಳಿನಾಕಾರದ ಪಟ್ಟಿಗಳನ್ನು ಹೊಂದಿಸಿದೆ. ಬೆರಳುಗಳಿಗೆ ತ್ರಿಕೋಣಾಕಾರದ ಉಕ್ಕಿನ ಅಲಗುಗಳನ್ನು ರಿವೆಟ್ ಮಾಡಲಾಗಿದೆ. ಉಕ್ಕಿನ ಅಗುಳಿ ನೆಲಕ್ಕೆ ಸಮೀಪದಲ್ಲಿ ಹಾದು ಅದರ ಬೆರಳುಗಳು ಹುಲ್ಲನ್ನು ಬಾಚುತ್ತವೆ. ಅಲಗುಗಳು ಹುಲ್ಲನ್ನು ಕಟಾಯಿಸುತ್ತವೆ. ಚೌಕಟ್ಟಿಗೆ ಜೋಡಿಸಿದ ಈ ಉಕ್ಕಿನ ಅಗುಳಿಯನ್ನು ಟ್ರ್ಯಾಕ್ಟರಿಗಾಗಲೀ ಕುದುರೆ ಅಥವಾ ಎತ್ತು ಎಳೆಯುವ ಯಾವುದೇ ಸಾಧನಕ್ಕಾಗಲೀ ಜೋಡಿಸುವುದು ಸಾಧ್ಯ. ಹೀಗೆ ಕಟಾವಾದ ಹುಲ್ಲನ್ನು ಉಪಕರಣಗಳಿಂದ ಕೂಡಿಸಿ, ಕತ್ತರಿಸಿ ಪಿಂಡಿ ಕಟ್ಟಿ ದಾಸ್ತಾನು ಮಾಡುತ್ತಾರೆ.

 ಮೇವು ಕಟಾವು ಯಂತ್ರ 
ಹುಲ್ಲು, ದ್ವಿದಳದ ಪೈರು, ಮೆಕ್ಕೆಜೋಳ ಮತ್ತಿತರ ಬೆಳೆಗಳನ್ನು ಕಟಾಯಿಸಿ, ಒಣಗಿಸದೆ ಹಸಿಯಾಗಿ ರಕ್ಷಿಸಿ ಕಳಿತ ಸ್ಥಿತಿಯಲ್ಲಿ ದನಗಳಿಗೆ ತಿನ್ನಿಸುವುದು ಪಾಶ್ಚಾತ್ಯ ದೇಶಗಳಲ್ಲಿ ಸಾಮಾನ್ಯ ಪದ್ದತಿ. ಹಗೇವಿನಲ್ಲಿ ತುಂಬ ಬೇಕಾದರೆ ಮೇವನ್ನು ಸಣ್ಣಸಣ್ಣದಾಗಿ ಕತ್ತರಿಸುವುದು ಆವಶ್ಯಕ. ಆ ಯಂತ್ರಗಳಲ್ಲಿ ತುಂಡರಿಸುವ ಸಲಕರಣೆ, ಉಕ್ಕಿನ ಅಗುಳಿ ಮತ್ತು ತಿರುಗುವ ಕತ್ತರಿ ಅಥವಾ ಅಲಗುಗಳಿರುತ್ತವೆ. ತಮ್ಮ ಮಧ್ಯೆ ಸಿಕ್ಕಿದ ಪೈರನ್ನು ಇವು ತರಿಯುವುವು. ಕತ್ತರಿ ತಿರುಗುವ ವೇಗ ಇಲ್ಲವೇ ಅವುಗಳ ಸಂಖ್ಯೆಯ ಸೂಕ್ತ ಅಳವಡಿಕೆಯಿಂದ ಮೇವಿನ ತುಂಡನ್ನು ಬೇಕಾದಷ್ಟು ಉದ್ದಕ್ಕೆ ಕತ್ತರಿಸಬಹುದು. ಹೀಗೆ ತುಂಡರಿಸಿದ ಹುಲ್ಲು, ಕತ್ತರಿ ವ್ಯವಸ್ಥೆಯ ಅಂಗವಾದ ನಿಯಂತ್ರಣ ಚಕ್ರದ ಮೂಲಕವಾಗಿ ಹಾದು ಯಂತ್ರದ ಹಿಂಬದಿಯಲ್ಲಿ ಶೇಖರಣೆಯಾಗುತ್ತದೆ. ಯಂತ್ರದ ಕೆಲಸಕ್ಕೆ ಟ್ರ್ಯಾಕ್ಟರ್ ಇಲ್ಲವೇ ಡೀಸಲ್ ಎಣ್ಣೆ ಎಂಜಿನುಗಳನ್ನು ಬಳಸಬಹುದು. ಕಟಾವಾಗುವ ಮೇವಿಗೆ ಅನುಗುಣವಾಗಿ ವಿವಿಧ ಸಜ್ಜುಗಳನ್ನು ಯಂತ್ರಕ್ಕೆ ಅಳವಡಿಸುವುದು ಸಾಧ್ಯ.
ಧಾನ್ಯ ಕೊಯ್ಲು ಒಕ್ಕಣೆ ಯಂತ್ರ (ಗ್ರೆಯ್ನ್‌ ಕಂಬೈನ್): ಧಾನ್ಯ ಅಥವಾ ಏಕದಳ ಪೈರುಗಳನ್ನು ಕಾಳು ಬಲಿತು ತಕ್ಕಮಟ್ಟಿಗೆ ಒಣಗಿದ ಮೇಲೆ ತೆಗೆಯುತ್ತಾರೆ. ಕೊಯ್ಲು ಮತ್ತು ಒಕ್ಕುವ ಕಾರ್ಯವನ್ನು ಒಂದೇ ಸಾರಿ ಮಾಡಬಲ್ಲ ಯಂತ್ರದ ಸಹಾಯದಿಂದ ಕಾಳನ್ನು ಬೇರ್ಪಡಿಸುತ್ತಾರೆ. ಕಾರ್ಯನುಕೂಲಕ್ಕೆ ಅನುಗುಣವಾಗಿ ಹೊರೆ ಕಟ್ಟುವುದಕ್ಕೆ, ತೆನೆ ಕೊಯ್ಯುವುದಕ್ಕೆ ಅಗತ್ಯವಾದ ಯಂತ್ರಸಾಧನಗಳು ಅಳವಟ್ಟಿವೆ. ಜಮೀನಿನಲ್ಲಿ ಯಂತ್ರ ಸಾಗುತ್ತಿದ್ದಂತೆಯೇ ಪೈರು ಕೊಯ್ಲು, ಕಾಳು, ಹುಲ್ಲು ಬೇರ್ಪಡೆ, ಹೊಟ್ಟನ್ನು ಕಾಳಿನಿಂದ ತೂರುವುದು-ಈ ಎಲ್ಲ ಕೆಲಸ ಆಗುತ್ತದೆ. ಈ ಯಂತ್ರದಲ್ಲಿ ಪೈರು ಕಟಾಯಿಸಿ ಹೊರೆ ಕಟ್ಟುವ ಸಾಧನವೂ ಅಳವಡಿಕೆಯಾಗಿರುತ್ತದೆ. ಹೀಗೆ ಕಟ್ಟಿದೆ ಹೊರೆ ಸಾಗಣಿ ಪಟ್ಟಿಯ (ಕನ್ವೇಯರ್ ಬೆಲ್ಟ್‌) ಮೂಲಕ ಯಂತ್ರದಲ್ಲೇ ಜೋಡಿಸಿರುವ ಒಕ್ಕಣೆ ಸಲಕರಣೆಗೆ ಹೋಗುವ ಏರ್ಪಾಡು ಇದೆ. ಚಲಿಸುತ್ತಿರುವಾಗಲೇ ಸಮರ್ಪಕವಾಗಿ ಕೆಲಸಮಾಡುವಂತೆ ಒಕ್ಕಣೆ ಸಲಕರಣೆ ಸಜ್ಜಾಗಿರುತ್ತದೆ. ಹೀಗೆ ಬೇರೆ ಮಾಡಿದ ಕಾಳನ್ನು ಜರಡಿ ಮತ್ತು ಬಿರುಸು ಗಾಳಿ ಮೂಲಕ ಹಾಯಿಸಿ  ಒಪ್ಪಮಾಡುವ ಸಾಧನವೂ ಯಂತ್ರದಲ್ಲಿ ಹೊಂದಿಕೆಯಾಗಿದೆ. ಇಂದು ಎಲ್ಲ ಕೊಯ್ಲು 
ಒಕ್ಕಣೆಯಂತ್ರಗಳನ್ನೂ ಸ್ವಯಂಚಾಲಿತ ಗೊಳಿಸಲಾಗಿದೆ. ಇಳಿಮೇಡು ಭೂಮಿಗಳಲ್ಲಿ ಕೆಲಸಮಾಡುವಾಗ ಇವುಗಳಿಗೆ ನೀರಿನ ಒತ್ತಡ ನಾಳಿಗಳನ್ನು (ಹೈಡ್ರಾಲಿಕ್ ಸಿಲಿಂಡರುಗಳು) ಸಜ್ಜಿಸಿರುತ್ತಾರೆ. ಇದರಿಂದ ಯಂತ್ರದ ಭಾರ ಒಂದೇ ದಿಕ್ಕಿನಲ್ಲಾಗದೆ ಸಮತೋಲ ಉಳಿಯುವುದು ಸಾಧ್ಯ.

 ಅರಳೆ ಒಕ್ಕುವ ಸಾಧನ 
ಅರಳಿದ ಹತ್ತಿಕಾಯನ್ನು ಕೈನಿಂದ ಬಿಡಿಸುವುದೇ ಎಲ್ಲೆಡೆ ಇದ್ದ ವಾಡಿಕೆ. ಈ ಶತಮಾನದ ದ್ವಿತೀಯಾರ್ಧದಲ್ಲಿ ಇದಕ್ಕೂ ಯಂತ್ರ ಬಳಕೆ ಪ್ರಾರಂಭವಾಗಿದೆ. ಈ ಸಲಕರಣೆಯ ಮುಖ್ಯ ಅಂಶ ಒದ್ದೆಯಾಗಿರುವ ತಿರುಗಚ್ಚಿಗೆ ಹೊಂದಿಕೊಂಡು ಸುತ್ತುತ್ತಿರುವ ಪಿಪಾಯಿಗಳು. ಹತ್ತಿಗಿಡ ಇವುಗಳ ಮಧ್ಯೆ ಸೆಳೆಯಲ್ಪಡುವುದು. ತಿರುಗಚ್ಚಿಗೆ ಮೊಳೆಗಳಿವೆ. ಹತ್ತಿಕಾಯಿಲ್ಲಿನ ಅರಳೆ ತಿರುಗಚ್ಚಿನ ಸುತ್ತಲೂ ಅಂಟಿಕೊಳ್ಳುವುದು. ಅನಂತರ ತಿರುಗಚ್ಚಿನಿಂದ ಹತ್ತಿಯನ್ನು ಬೇರೆ ಮಾಡುವುದು ಸಾಧ್ಯ.

 ಆಲೂಗೆಡ್ಡೆ ಅಗೆಯುವ ಯಂತ್ರ 
ಈ ದಿಕ್ಕಿನಲ್ಲಿ ಮೊದಲು ಉಪಯೋಗಕ್ಕೆ ಬಂದದ್ದು ಗೆಡ್ಡೆಗಳನ್ನು ನೆಲದಿಂದ ಎತ್ತಲು ಅನುಕೂಲವಾಗುವಂತೆ ಗುಳಕ್ಕೆ ಕಬ್ಬಿಣದ ಕಂಬಿಗಳನ್ನು ಸಜ್ಜಿಸಿರುವ ನೇಗಿಲು. ನೇಗಿಲು ಸಾಗಿದಂತೆಲ್ಲ ಮಣ್ಣು ಸಡಿಲವಾಗಿ ಗೆಡ್ಡೆ ಮೇಲಕ್ಕೆ ಎಸೆಯಲ್ಪಡುತ್ತದೆ. ಇಂಥ ನೇಗಿಲಿನ ಜೊತೆಗೆ ಕುಲುಕುವ ಕಂಬಿಯ ಚೌಕಟ್ಟು ಇದೆ. ಗೆಡ್ಡೆ ಇದರಲ್ಲಿ ಕುಲುಕಿ ಮಣ್ಣು ಬೇರೆಯಾಗಿ ಚೀಲಕ್ಕೆ ತುಂಬಲು ಅನುಕೂಲಿಸುವಂತೆ ಸಾಲಿನಲ್ಲಿ ಗೆಡ್ಡೆ ಬೀಳುತ್ತದೆ. 

 ಗೆಡ್ಡೆ ಪೈರು ಕೊಯ್ಲು ಯಂತ್ರ 
ಇದು ಒಂದೇ ಸಲ ಅಗೆದು, ಕಿತ್ತು, ಟ್ರಕ್ಕುಗಳಲ್ಲಿ ತುಂಬುವ ಕೆಲಸವನ್ನೆಲ್ಲ ಮಾಡಬಲ್ಲುದು. ಕೆಂಪು ಮೂಲಂಗಿ, ಬೀಟ್ರೂಟ್ ಮುಂತಾದ ಗೆಡ್ಡೆಗಳ ಸುತ್ತ ಇರುವ ಮಣ್ಣನ್ನು ಒಂದು ವಿಶಿಷ್ಟ ರೀತಿಯ ಗುಳ ಸಡಿಲ ಮಾಡುವುದು. ಅನಂತರ ಅದನ್ನು ಆಸರೆ ಕಡ್ಡಿಯ ಸಹಾಯದಿಂದ ಮೇಲೆತ್ತಲಾಗುವುದು. ಬಂದ ಗಿಡದ ಕಾಂಡ ಎರಡು ರಬ್ಬರ್ ಪಟ್ಟಿಗಳ ಮಧ್ಯೆ ಭದ್ರವಾಗಿ ಹಿಂಡಲ್ಪಡುತ್ತದೆ. ಆಗ ಕಾಂಡ ಮತ್ತು ಗೆಡ್ಡೆ ಸೂಕ್ತ ಸಜ್ಜಿನ ಸಹಾಯದಿಂದ ಬೇರ್ಪಟ್ಟು ಕಾಂಡ ನೆಲಕ್ಕೆ ಬೀಳುತ್ತದೆ. ಗೆಡ್ಡೆ ಪಕ್ಕದಲ್ಲಿರುವ ಚಲಿಸುತ್ತಿರುವ ತೊಟ್ಟಿಯಂಥ ಸಾಧನಕ್ಕೆ ಎಸೆಯಲ್ಪಟ್ಟು ಮುಂದೆ ಟ್ರಕ್ಕಿಗೆ ರವಾನೆಯಾಗುತ್ತದೆ. ಇಂಥ ಯಂತ್ರಗಳು ದಿನ ಒಂದಕ್ಕೆ ಸುಮಾರು 4ಳಿ ಹೆಕ್ಟೇರು ಪ್ರದೇಶದ ಮೂಲಂಗಿ ಕೊಯ್ಲನ್ನು ಮಾಡಬಲ್ಲವು.
ಈರುಳ್ಳಿ ಅಗೆಯುವ ಯಂತ್ರದಲ್ಲಿ, ಗೆಡ್ಡೆ ತಳದಲ್ಲಿ ಮಣ್ಣು ಕತ್ತರಿಸಲು ಅಲಗು ಸಜ್ಜಾಗಿರುತ್ತದೆ. ಕತ್ತರಿಸಿದ ಬಳಿಕ ಮೇಲಿನ ಗಿಡ ಒಣಗುತ್ತದೆ. ಅನಂತರ ಯಂತ್ರ ಗೆಡ್ಡೆಯನ್ನು ಮೇಲಕ್ಕೆ ಎತ್ತಿಕೊಳ್ಳುತ್ತದೆ. ಕತ್ತರಿ-ಅಲಗು ಗೆಡ್ಡೆಯನ್ನು ಮೇಲ್ಭಾಗದಿಂದ ಬೇರ್ಪಡಿಸುತ್ತದೆ. ಬಿರುಸು ಗಾಳಿ ಈರುಳ್ಳಿ ಹುಲ್ಲನ್ನು ಹೊರ ಒಗೆಯುತ್ತದೆ. ಸಾಗಣೆಪಟ್ಟಿಯ ಮೂಲಕ ಸಾಗಿದ ಗೆಡ್ಡೆ ಒಂದು ಕಡೆ ಗುಡ್ಡೆಯಾಗುತ್ತದೆ.

 ಹಣ್ಣುಗಳ ಕೊಯ್ಲು ಸಜ್ಜುಗಳು 
ಭಾರತದಲ್ಲಿ ಸಾಮಾನ್ಯವಾಗಿ ಕಿತ್ತಳೆ, ಮಾವು ಮತ್ತಿತರ ಎಲ್ಲ ಹಣ್ಣುಗಳ ಕೊಯ್ಲು ಕೈಗಳಿಂದಲೇ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಈ ಕೊಯ್ಲಿಗೂ ಯಂತ್ರಗಳು ಬಳಕೆಗೆ ಬರುತ್ತಿವೆ. ಯಂತ್ರಗಳ ಸಹಾಯದಿಂದ ಗಿಡಗಳನ್ನು ಅಲ್ಲಾಡಿಸಿ ನೆಲದ ಮೇಲೆ ಬಿದ್ದ ಹಣ್ಣುಗಳನ್ನು ಯಂತ್ರಗಳಿಂದ ಎತ್ತಿಕೊಳ್ಳುವ ಕ್ರಮ ಒಂದು. ಗಿಡಗಳನ್ನು ಅಲ್ಲಾಡಿಸಿ ಹಣ್ಣುಗಳನ್ನು ಜಾಲಗಳಲ್ಲಿ ಬೀಳಿಸಿ ಅವನ್ನು ಸಾಗಿಸಿ ಒಟ್ಟುಮಾಡುವುದು ಇನ್ನೊಂದು. ವಿವಿಧ ಜಾತಿಯ ಹಣ್ಣುಗಳ ಕೊಯ್ಲಿಗೆ ಸರಿಹೋಗುವಂತೆ ಸಜ್ಜುಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನ ನಡೆದಿದೆ.

ತೋಟಗಳಲ್ಲಿ ಕೊಯ್ಲಿಗೆ ಯಂತ್ರಗಳನ್ನು ಬಳಸುವುದಾದರೆ, ಗಿಡಗಳನ್ನು ಸಾಕಷ್ಟು ಅಂತರದಲ್ಲಿ ನೆಡುವುದು ಅಗತ್ಯ. ಮಧ್ಯದ ನೆಲ ಮಟ್ಟಸವಾಗಿರಬೇಕು. ಗಿಡಗಳ ಮಧ್ಯೆ ಯಂತ್ರಗಳನ್ನು ಸರಿಸುವಾಗ ಅವು ರೆಂಬೆಗಳಿಗೆ ತಗುಲಿ ನಷ್ಟವಾಗದಂತೆ ನೋಡಿಕೊಳ್ಳುವುದು ಆವಶ್ಯಕ. ಎತ್ತರದ ಗಿಡಗಳಿಂದ ಹಣ್ಣು ಕೊಯ್ಯಲು ಯಂತ್ರಗಳ ಸಹಾಯದಿಂದ ಚಲಿಸುವ ಅಟ್ಟಣೆಗಳು ಬಳಕೆಯಲ್ಲಿವೆ. ಇದರಿಂದ ಮನುಷ್ಯ ಮರ ಹತ್ತಿ ಇಳಿಯುವುದು ತಪ್ಪುತ್ತದೆ. ಅಟ್ಟಣೆಗಳನ್ನು ವಿವಿಧ ಮಟ್ಟಕ್ಕೆ ಏರಿಸಿ, ಇಲ್ಲವೇ ಇಳಿಸಿ ಹಣ್ಣುಗಳನ್ನು ಹೆಚ್ಚು ಪ್ರಯಾಸವಿಲ್ಲದೆ ಕೀಳಬಹುದು.
ತರಕಾರಿ ಕೊಯ್ಲು ಯಂತ್ರಗಳು: ತರಕಾರಿ ಬಿಡಿಸುವುದು ಶ್ರಮದ ಕೆಲಸ. ಹೆಚ್ಚು ಆಳುಗಳು ಬೇಕಾಗುತ್ತಾರೆ. ಕೂಲಿ ಹೆಚ್ಚಾದೆಡೆ ವೆಚ್ಚ ಹೆಚ್ಚಾಗುವುದು ಸ್ವಾಭಾವಿಕ. ಕಾಯಿಗಳೆಲ್ಲ ಒಂದೇ ಸಮಕ್ಕೆ ಬಲಿತರೆ ಯಂತ್ರಗಳಿಂದ ಅವನ್ನು ಕೊಯ್ಯುವುದು ಸುಲಭ. ಈ ದಿಕ್ಕಿನಲ್ಲಿ ಬಂದಿರುವ ಮೊದಲ ಯಂತ್ರ ತಿಂಗಳ ಹುರುಳಿ ಕೊಯ್ಲಿನದು. ಸಸ್ಯವಿಜ್ಞಾನಿಗಳು ಇಂಥ ಜಾತಿಯ ಬೆಳೆಯನ್ನು ಶೋಧಿಸಿ ಬೆಳೆಸಬೇಕಾಯಿತು. ಇದರ ಎರಡು ಸಾಲು ಬೆಳೆಯನ್ನು ಒಟ್ಟಿಗೆ ಕೊಯ್ಯಬಲ್ಲ ಈ ಯಂತ್ರಗಳಲ್ಲಿ ಸುತ್ತುತ್ತಿರುವ ಎರಡು ರೋಣುಗಳಿವೆ. ಎಲೆ, ಗಿಡ ಇವುಗಳ ಮಧ್ಯೆ ಸಿಕ್ಕಿಕೊಂಡು ಕಾಯಿ ಗಿಡದಿಂದ ಬೇರೆಯಾಗುವುದು. ಸೊಪ್ಪು ನೆಲದ ಮೇಲೆ ಬೀಳುತ್ತದೆ. ಹಾಗೆಯೇ ಎಲೆಕೋಸು, ಸೌತೆಕಾಯಿ, ಇತರ ಬೆಳೆಗಳ ಕೊಯ್ಲಿಗೆ ಅನುಕೂಲವಾದ ಸಜ್ಜುಗಳನ್ನು ಅಳವಡಿಸಿದ್ದಾರೆ.ಬಳಕೆಯಲ್ಲಿರುವ ಇತರ ಯಂತ್ರಗಳೆಂದರೆ ಕಬ್ಬುಕೊಯ್ಲಿನ ಯಂತ್ರ, ಮೆಕ್ಕೆಜೋಳ ಒಕ್ಕಣೆ ಯಂತ್ರ ಮುಂತಾದುವು.	(ಬಿ.ವಿ.ವಿ.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ